ಬಾಳೆಹೊನ್ನೂರು
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ.  ಚಿಕ್ಕಮಗಳೂರಿನಿಂದ ಸುಮಾರು 51 ಕಿ.ಮಿ ದೂರದಲ್ಲಿ ಭದ್ರಾನದಿಯ ಪಶ್ಚಿಮ ದಂಡೆಯ ಮೇಲಿದೆ.  ನದಿಯ ಸಮೀಪದಲ್ಲಿರುವ ಕೆಲವು ದೊಡ್ಡ ಬಂಡೆಗಳ ಮೇಲೆ ಕೆತ್ತಿರುವ ಶಾಸನಗಳ ಆಧಾರದಿಂದ ಈ ಪ್ರದೇಶವನ್ನು ಸಾಂತರ ದೊರೆ ಎರಡನೆಯ ಮಯೂರವರ್ಮನ ಮಗ ಮಾರ ಆಳುತ್ತಿದ್ದನೆಂದೂ ಈತ ವಾದೀಭಸಿಂಹ ಅಜಿತಸೇನ ಎಂಬ ಜೈನ ಮುನಿಯ ಶಿಷ್ಯನಾಗಿದ್ದನೆಂದೂ ತಿಳಿದುಬರುತ್ತದೆ.  ಶಾಸನವಿರುವ ಬಂಡೆಯೊಂದರ ಮೇಲೆ ಜಿನಮೂರ್ತಿಯ ಚಿತ್ರವಿದೆ.  ಈ ಬಂಡೆಯನ್ನು ಬೊಮ್ಮನ ಕಲ್ಲು ಎಂದು ಕರೆಯುತ್ತಾರೆ.  ಈ ಊರಿನ ಉತ್ತರಕ್ಕೆ ಒಂದೂವರೆ ಕಿಮೀ ದೂರದಲ್ಲಿರುವ ಬಾಳೆಹಳ್ಳಿಯಲ್ಲಿ ವೀರಶೈವ ಪಂಚಾಚಾರ್ಯರಲ್ಲಿ ಪ್ರಮುಖರಾದ ರೇಣುಕಾಚಾರ್ಯರು ಸ್ಥಾಪಿಸಿದ ಮಠವಿದೆ.  ಇದನ್ನು ಶ್ರೀರಂಭಾಪುರಿ ಜಗದ್ಗುರುಗಳ ಮಠ ಎಂದೂ ಬಾಳೆಹಳ್ಳಿ ಮಠ ಎಂದೂ ಕರೆಯುತ್ತಾರೆ.  ಇಲ್ಲಿರುವ ಆಚಾರ್ಯರ ಪೀಠಕ್ಕೆ ವೀರಸಿಂಹಾಸನ ಎಂದು ಹೆಸರು.  ಮಠದಲ್ಲಿ ಇಕ್ಕೇರಿ ನಾಯಕರು ಮತ್ತು ಮೈಸೂರು ಅರಸರು ನೀಡಿರುವ ಅನೇಕ ತಾಮ್ರಪಟಗಳೂ ಸನ್ನದುಗಳೂ ಇವೆ.  ಮಠಕ್ಕೆ ಹೊಂದಿಕೊಂಡಂತೆ ಬಲಭಾಗದಲ್ಲಿ ವೀರಭದ್ರನ ದೇವಸ್ಥಾನವಿದೆ.  ಇದು ದ್ರಾವಿಡ ಶೈಲಿಯಲ್ಲಿದ್ದು, ದೊಡ್ಡ ಪ್ರಾಕಾರವನ್ನು ಹೊಂದಿದೆ.  ನವರಂಗದ ಇಕ್ಕೆಲಗಳಲ್ಲೂ ಗರ್ಭಗೃಹಗಳಿವೆ. ಬಲಭಾಗದ ಗರ್ಭಗೃಹದಲ್ಲಿ ಲಿಂಗ ಮತ್ತು ಎಡಭಾಗದ ಗರ್ಭಗೃಹದಲ್ಲಿ ಗಣಪತಿ ಹಾಗೂ ಶೂಲಬ್ರಹ್ಮನ ವಿಗ್ರಹಗಳಿವೆ. ನವರಂಗದಲ್ಲಿ ಲೋಹದಲ್ಲಿ ಮಾಡಿದ ವೀರಭದ್ರನ ಹಾಗೂ ಭದ್ರಕಾಳಿಯ ವಿಗ್ರಹಗಳಿದ್ದು ಇವನ್ನು ವರ್ಷಕ್ಕೊಮ್ಮೆ ಉತ್ಸವ ಸಮಯದಲ್ಲಿ ಹೊರತೆಗೆಯುತ್ತಾರೆ.  ಇಲ್ಲಿ ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ವೀರಭದ್ರಸ್ವಾಮಿಯ ರಥೋತ್ಸವ ನಡೆಯುತ್ತದೆ.

	ಚಿಕ್ಕಮಗಳೂರು-ಕೊಟಿಗೆಹಾರ ಹೆದ್ದಾರಿ ಬಾಳೆಹೊನ್ನೂರು ಮೂಲಕ ಹಾದುಹೋಗುತ್ತದೆ.  ಈ ಊರಿನಲ್ಲಿ ಒಂದು ಕಾಫಿ ಸಂಶೋಧನ ಕೇಂದ್ರವಿದೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ